ಏಕೆನ್, ಕಾನ್ರ್ಯಾಡ್ ಪಾಟರ್: 1889-ಅಮೆರಿಕದ ಕವಿ, ಕಾದಂಬರಿಕಾರ. ಜಾರ್ಜಿಯ ಪ್ರಾಂತ್ಯದ ಸವಾನದಲ್ಲಿ ವೈದ್ಯನೊಬ್ಬನ ಮಗ. ಇವನಿಗೆ ಹನ್ನೊಂದು ವರ್ಷ ವಯಸ್ಸಾಗಿದ್ದಾಗ ತಂದೆ ತಾಯಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ. ಏಕೆನ್ ಹಾರ್ವರ್ಡಿನಲ್ಲಿ ವ್ಯಾಸಂಗ ಮುಂದುವರಿಸಿದ. ಅಲ್ಲಿ ಇವನೂ ಟಿ.ಎಸ್. ಎಲಿಯಟನೂ ಸಮಕಾಲೀನ ವಿದ್ಯಾರ್ಥಿಗಳಾಗಿದ್ದರು (1911). ಏಕೆನ್ 1912ರಲ್ಲಿ ಮೊದಲ ಮದುವೆಯಾಗಿ ಮೆಸಾಚೂಸೆಟ್ಸ್‌ನಲ್ಲಿ ನೆಲೆ ತನ್ನ ವೇಳೆಯನ್ನೆಲ್ಲ ಸಾಹಿತ್ಯಕ್ಕಾಗಿ ಮೀಸಲಾಗಿರಿಸಿದ. ಕಾವ್ಯರಚನೆಯೂ  ಒಂದು ಆವಶ್ಯ ಕೈಗಾರಿಕೆಯಾದ್ದರಿಂದ ನಾನು ಯುದ್ಧ ಮಾಡಲೊಲ್ಲೆ-ಎಂದು ವಾದಿಸಿ ಈತ ಒಂದನೆಯ ಮಹಾಯುದ್ಧದಲ್ಲಿ ಕಡ್ಡಾಯ ಸೈನಿಕ ಸೇವೆಯಿಂದ ವಿನಾಯಿತಿ ಪಡೆದ. 1914ರಲ್ಲಿ ಈತನ ಮೊದಲನೆಯ ಕೃತಿ ಅರ್ತ್ ಟ್ರೈಯಂಫಂಟ್ ಪ್ರಕಟವಾಯಿತು. 

1915ರಿಂದ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈತ ಸಫಲವಾಗಿ ಕಾವ್ಯ ರಚಿಸಿದ್ದಾನೆನ್ನಬಹುದು. ಸಂಗೀತ ಪ್ರಧಾನವಾದ ಶುದ್ಧ ಕಾವ್ಯರಚನೆಯೇ ಆಗ ಈತನ ಉದ್ದೇಶವಾಗಿತ್ತು. ಮುಂದೆ ಕಥನಕವನಗಳನ್ನೂ ಭಾವಗೀತೆಗಳನ್ನು ಚಿಂತನಪರಕಾವ್ಯವನ್ನೂ ಸೃಷ್ಟಿಸಿದ. 1929ರಲ್ಲಿ ಪ್ರಕಟಿತವಾದ ಸೆಲೆಕ್ಟೆಡ್ ಪೋಯೆಮ್ಸ್‌ ಎಂಬ ಕೃತಿ ಪುಲೆಟ್ಜರ್ ಪಾರಿತೋಷಕವನ್ನೂ ಶೆಲ್ಲಿ ಸ್ಮಾರಕ ಬಹುಮಾನವನ್ನೂ ಪಡೆಯಿತು. ಮಹಾಯುದ್ಧಾನಂತರ ಕಾಲದಲ್ಲಿ ಈತ ಮತ್ತೆ ಸಂಗೀತಪ್ರಧಾನ ಕಾವ್ಯರಚನೆಯಲ್ಲಿ ತೊಡಗಿದ. ಅವುಗಳಲ್ಲಿ  ಮನೋವೈಜ್ಞಾನಿಕ ಲಕ್ಷಣಗಳು ಹೆಚ್ಚಾಗಿವೆ. ಈ ಕಾಲದ ಇಂಥ ಕೃತಿಗಳಲ್ಲಿ ದಿ ಸೋಲ್ಚರ್ (1944), ದಿ ಕಿಡ್ (1947). ಸ್ಕೈಲೈಟ್ ಒನ್ (1949) ಮುಖ್ಯವಾದವು. ಈತನ ಕಲೆಕ್ಟೆಡ್ ಪೋಯೆಮ್ಸ್‌ 1953ರಲ್ಲಿ ಹೊರಬಂತು.

ಏಕೆನನ ಪ್ರತಿಭೆ ಕಾವ್ಯಸೃಷ್ಟಿಯಷ್ಟಕ್ಕೇ ಸೀಮಿತವಾದದ್ದಲ್ಲ. ಈತ ಐದು ಕಾದಂಬರಿ ಗಳನ್ನೂ ಬರೆದ. ಇವುಗಳ ಪೈಕಿ ಬ್ಲೂ ವಾಯೇಜ್ (1927) ಮೊದಲನೆಯದು. ನಾಲ್ಕು ಕಥಾಸಂಕಲನಗಳೂ ಇವನಿಂದ ಪ್ರಕಟವಾಗಿವೆ. (1950ರಲ್ಲಿ ಪ್ರಕಟವಾದ ಸಂಕಲನ ಪ್ರಾತಿನಿಧಿಕವಾದದ್ದು.) ಈ ಕಥೆಗಳು ಮುಖ್ಯವಾಗಿ ಮನೋವಿಶ್ಲೇಷಣಾತ್ಮಕ ವಾದವು. ಈತ ಅನೇಕ ವಿಮರ್ಶಾತ್ಮಕ (ಉದಾ: ಮಿ. ಆಕುರ್ಯ್‌ಲಂಸ್, 1949) ಆತ್ಮಕಥಾತ್ಮಕ (ಉಷಾಂತ್, 1952) ಪ್ರಬಂಧಗಳನ್ನೂ ಬರೆದಿದ್ದಾನೆ. 1953ರಲ್ಲಿ ಏಕೆನ್ನನ 900 ಪುಟಗಳ ಕವನ ಸಂಕಲನ ಪ್ರಕಟವಾದಾಗಲೇ ಈತನ ಕೃತಿಯ ಮಹತ್ತೂ ಬೃಹತ್ತೂ ಮೊಟ್ಟಮೊದಲ ಬಾರಿಗೆ ಹಲವರ ಗಮನ ಸೆಳೆಯಿತೆನ್ನಬಹುದು. ಬಹು ದೀರ್ಘಕಾಲ ಈತ ಅಜ್ಞಾತ ಲೇಖಕನಾಗಿಯೇ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದ.

ಟಿ. ಎಸ್. ಎಲಿಯಟನ ದಿ ವೇಸ್ಟ್‌ ಲ್ಯಾಂಡ್ ಕವನ ಈತನ ದಿ ಹೌಸ್ ಆಫ್ ಡಸ್ಟ್‌ (1920) ನಿಂದ ಪ್ರಭಾವಿತವಾಗಿದೆಯೆಂದು ಕೆಲವರ ಅಭಿಪ್ರಾಯ. ಸಂಗೀತ ತಂತ್ರ, ಪ್ರತಿಮಾವಿಧಾನ-ಇವು ಈತನ ಕಾವ್ಯದ ವೈಶಿಷ್ಟ್ಯಗಳೆಂದು ವಿಮರ್ಶಕರ ಮತ.	              
(ಎಂ.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ